ಶ್ರೀ ವ್ಯಾಸರಾಜ ಗುರುಸಾರ್ವಭೌಮರ 483 ನೆಯ ಆರಾಧನಾ ಮಹೋತ್ಸವ

Vyasaraja

ಪರಮಪೂಜ್ಯ ಶ್ರೀ ವ್ಯಾಸರಾಜ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀ ಪಾದಂಗಳವರು ದಿನಾಂಕ 21, 22, 23 ಮಾರ್ಚ ತಿಂಗಳ 2022, ಈ ಮೂರು ದಿನಗಳಲ್ಲಿ ನವವ್ರೃಂದಾವನದಲ್ಲಿ ಶ್ರೀ ವ್ಯಾಸರಾಜ ಗುರುಸಾರ್ವಭೌಮರ 483 ನೆಯ ಆರಾಧನಾ ಮಹೋತ್ಸವವನ್ನು ಅಭೂತಪೂರ್ವವಾಗಿ ನಡೆಸಿದರು. ದಿನಾಂಕ 20 ರಂದು ಶ್ರೀ ವ್ಯಾಸರಾಜ ಪ್ರತಿಷ್ಠಿತ ಯಂತ್ರೋದ್ಧಾರಕ ಶ್ರೀ ಮುಖ್ಯ ಪ್ರಾಣದೇವರ ಸನ್ನಿಧಾನದಲ್ಲಿ ಮಧು ಅಭಿಷೇಕ, ವಾಯುಸ್ತುತಿ ಪುರಶ್ಚರಣ ದೊಂದಿಗೆ ಆರಂಭವಾದ ಗುರುಗಳ ಕೈಂಕರ್ಯ ದಿನಾಂಕ 23 ರಂದು ಸಂಜೆ ಶ್ರೀ ವ್ಯಾಸರಾಜರ ವ್ರೃಂದಾವನದ ಸನ್ನಿಧಿಯಲ್ಲಿ ನಡೆಸಿದ ರಾತ್ರಿ ಪೂಜೆಯೊಂದಿಗೆ ಸಂಪನ್ನವಾಯಿತು. 80 ಸಾರ್ಥಕ ವಸಂತಗಳನ್ನು ಕಾಣುತ್ತಿರುವ ಶ್ರೀಗಳ ಆರಾಧನಾ ಸಮಯದ ದಿನಚರಿಯನ್ನು ಗಮನಿಸಿದರೆ ಸ್ವತಃ ಶ್ರೀವ್ಯಾಸರಾಜರ ಶಿಷ್ಯರಾದ ಶ್ರೀ ಶ್ರೀನಿವಾಸತೀರ್ಥರೇ ತಮ್ಮ ಗುರುಗಳ ಆರಾಧನೆಯನ್ನು ಶ್ರೀ ವಿದ್ಯಾಶ್ರೀಶ ತೀರ್ಥರಲ್ಲಿ ಸನ್ನಿಹಿತರಾಗಿ ನಡೆಸುತ್ತಿದ್ದಾರೋ ಏನೋ ಎಂಬಂತೆ ಹಲವು ಭಕ್ತರ ಅನಿಸಿಕೆ ಅಲ್ಲಲ್ಲಿ ಗುನುಗುನಿಸಿತು. ಬನ್ನಿ ಒಮ್ಮೆ ಗುರುಗಳ ದಿನಚರಿಯನ್ನು ಗಮನಿಸೋಣ, ಆಗ ಭಕ್ತರ ಭಾವನೆಗೆ ಅರ್ಥ ಕಂಡೀತು.


ಪ್ರಾತಃ 3.30 ಗೆ ಆರಂಭವಾಗುತ್ತಿದ್ದ ಶ್ರೀಗಳ ದಿನಚರಿ ಪ್ರಾತರಾಹ್ನೀಕ, ಸಂಸ್ಥಾನಪೂಜೆ, ಶ್ರೀ ವ್ಯಾಸರಾಜರ ಮೂಲವ್ರೃಂದಾವನಕ್ಕೆ ಭಾರೀ ಪದಾರ್ಥಗಳ ಅಭಿಷೇಕ, ಸಭೆ, ಗಣ್ಯರ ಸನ್ಮಾನ, ಪುನಃ ಹಸ್ತೋದಕ ಸಮರ್ಪಣೆ, ಅಲಂಕಾರ ಬ್ರಾಹ್ಮಣರ ಆರಾಧನೆ, ಸಾವಿರಾರು ಭಕ್ತರಿಗೆ ತೀರ್ಥ ಹಾಗೂ ಪಂಚಭಕ್ಷ ಪರಮಾನ್ನೋಪೇತವಾದ ಸುಗ್ರಾಸ ಭೋಜನದ ವ್ಯವಸ್ಥೆ ಪರಿವೀಕ್ಷಣೆ. ಶ್ರೀ ಮಠದ ಸಂಪ್ರದಾಯದಂತೆ ದಶಪ್ರಮತಿ ದರ್ಶನ ಪ್ರಕಾಶಿನೀ ಸಭೆ, ಸಂಜೆ ಅಷ್ಟಾವಧಾನ ಸೇವೆ, ತೊಟ್ಟಿಲು ಪೂಜೆ, ಮಂತ್ರಾಕ್ಷತೆ ವಿತರಣೆ, ಸಾಂಸ್ಕೃತಿಕ ದಾಸವಾಣಿಕಾರ್ಯಕ್ರಮ. ಇಷ್ಟೆಲ್ಲಾ ಆಗುವಾಗ 80 ರ ಚೇತನದಲ್ಲಿ ಆಯಾಸ ಕಾಣದು ಹೊರತಾಗಿ ಮರುದಿನದ ಕಾರ್ಯಕ್ರಮಕ್ಕೆ ಮಾನಸಿಕ ತಯಾರಿ ಮನದಲ್ಲಿ ನಡೆಯುತ್ತಿತ್ತು.


ಈ ಸಲದ ಆರಾಧನೆ ವಿಶೇಷಗಳನ್ನು ಗಮನಿಸುವಾಗ, ಪ್ರತಿನಿತ್ಯ ಶ್ರೀ ವ್ಯಾಸತೀರ್ಥ ವಿದ್ಯಾಪೀಠದ ವಿದ್ಯಾರ್ಥಿಗಳ ಉದ್ಗ್ರಂಥಗಳ ಜೊತೆಗೆ ಪುಟ್ಟ ಮಕ್ಕಳ ಹಿರಿದಾದ ವ್ಯಾಕರಣಾದಿ ಶಾಸ್ತ್ರ ವಿಷಯಗಳ ಸುಲಲಿತವಾದ ಅನುವಾದ ವಿದ್ವಾಂಸರ ಮನಸೂರೆ ಮಾಡಿತು. ನೆರೆದ ವಿದ್ವಾಂಸರ ಅಷ್ಟೂ ಪ್ರಶ್ನೆಗಳಿಗೆ ಉತ್ತರ ನೀಡುತ್ತಿರುವ ವಿದ್ಯಾರ್ಥಿಗಳ ಉತ್ಸಾಹ ಕಂಡು ಪಂಡಿತ ಮಂಡಳಿಯು ಬಹಳಷ್ಟು ಮೆಚ್ಚುಗೆ ವ್ಯಕ್ತಪಡಿಸಿತು.


ಪ್ರತಿವರ್ಷದಂತೆ ಈ ವರ್ಷವೂ ವ್ಯಾಸ ಸಾಹಿತ್ಯ ಹಾಗೂ ದಾಸಸಾಹಿತ್ಯದಲ್ಲಿ ವಿಶಿಷ್ಟ ಸಾರಸ್ವತ ಸೇವೆಯನ್ನು ನಡೆಸಿದ ವಿದ್ವಾಂಸರಿಗೆ ಹಾಗೂ ಇತರ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತರಾದ ಮಹಾಮಹೋಪಾಧ್ಯಾಯ ಶ್ರೀ ಅ. ಹರಿದಾಸಭಟ್ಟರಿಗೆ ಒಂದು ಲಕ್ಷ ರೂಪಾಯಿ ಗಳನ್ನು ಒಳಗೊಂಡ ಶ್ರೀ ವ್ಯಾಸರಾಜಾನುಗ್ರಹ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ದಾಸಸಾಹಿತ್ಯದಲ್ಲಿ ಅನುಪಮ ಸೇವೆ ಸಲ್ಲಿಸಿದ ಟಿ.ಟಿ.ಡಿ. ದಾಸ ಸಾಹಿತ್ಯ ಪ್ರಾಜೆಕ್ಟ್ ನ ನಿವ್ರತ್ತ ಅಧಿಕಾರಿಗಳಾದ ಶ್ರೀ ಅಪ್ಪಣಾಚಾರ್ಯರಿಗೆ ಶ್ರೀಪುರಂದರಾನುಗ್ರಹ ಪ್ರಶಸ್ತಿ ಹಾಗೂ ಇದೇ ಸಂದರ್ಭದಲ್ಲಿ ಮತ್ತೋರ್ವರು ರಾಷ್ಟ್ರಪತಿ ಪುರಸ್ಕಾರವನ್ನು ಪಡೆದ ಶ್ರೀ ಸೇತುಮಾಧವನ್ ಆರ್, ಸೇರಿದಂತೆ ಹಲವು ಗಣ್ಯರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಉತ್ತರ ಆರಾಧನೆಯ ಪರ್ವಕಾಲದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಅಧ್ಯಕ್ಷರಾದ ಶ್ರೀ ಅಶೋಕ ಹಾರ್ನಳ್ಳಿರವರಿಗೆ ಶ್ರೀ ವ್ಯಾಸರಾಜ ಸೇವಾ ಧುರಂದರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹೀಗೆ ಮೂರು ದಿನಗಳ ಆರಾಧನೆಯ ಸೊಬಗನ್ನು ವರ್ಣಿಸಲು ಶಬ್ದಗಳು ಸಾಲವು. ನೋಡುಗರ ಕಣ್ಗಳೇ ಧನ್ಯ ಎಂದಿಷ್ಟು ಹೇಳಬಹುದು.

Leave a Comment

Your email address will not be published. Required fields are marked *

Scroll to Top